ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

2+3 ಸೂತ್ರ

ಯುಪಿಎ ಸರ್ಕಾರದ ತಪ್ಪುಗಳನ್ನು ಸರಿಪಡಿಸುತ್ತಲೇ ಅಭಿವೃದ್ಧಿ ಪಥದಲ್ಲಿ ಸಾಗುವ ತಮ್ಮ...

Rashmi Kasaragodu
Updated On : 9 Jun 2014, 12:48 pm

- ಈಗ ಅಧಿಕಾರ ವರ್ಗಕ್ಕೂ ವಿಸ್ತರಣೆ
- ಕಡತ ಓಡಾಡುವಂತಿಲ್ಲ ವಿಳಂಬಕ್ಕೆ ಅವಕಾಶವಿಲ್ಲ

ನವದೆಹಲಿ
: ಯುಪಿಎ ಸರ್ಕಾರದ ತಪ್ಪುಗಳನ್ನು ಸರಿಪಡಿಸುತ್ತಲೇ ಅಭಿವೃದ್ಧಿ ಪಥದಲ್ಲಿ ಸಾಗುವ ತಮ್ಮ ಸಂಕಲ್ಪಕ್ಕೆ ತಕ್ಕಂತೆ ಆಡಳಿತ ವ್ಯವಸ್ಥೆ ಸಜ್ಜುಗೊಳಿಸುವ ಪ್ರಯತ್ನದಲ್ಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಆ ಹಿನ್ನೆಲೆಯಲ್ಲಿಯೇ ಸಚಿವರು, ಸಂಸದರಿಗೆ ಕಿವಿಮಾತು ಹೇಳಿದ್ದ ಅವರು, ಈಗ ಅಧಿಕಾರಿಗಳಿಗೂ ಮಾರ್ಗದರ್ಶಿ ಸೂತ್ರ ನಿಗದಿಪಡಿಸಿದ್ದಾರೆ.
ಆರ್ಥಿಕತೆ ಸೇರಿದಂತೆ ವಿವಿಧ ರಂಗಗಳಲ್ಲಿ ಆಗಿರುವ ಹಿಂದಿನ ಸರ್ಕಾರದ ಎಡವಟ್ಟುಗಳನ್ನು ಮೊದಲ ಎರಡು ವರ್ಷದಲ್ಲಿ ಸರಿಪಡಿಸುವುದು. ಆ ಮೂಲಕ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುವುದು, ಜತೆಜತೆಗೇ ಜನಸಾಮಾನ್ಯರಿಗೂ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸುವುದು. ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿ ವೇಗ ಹೆಚ್ಚಿಸುವುದು. ಇದು ಮೋದಿ 2೤3 ಸೂತ್ರ.
'ನಿರ್ಭೀತಿಯಿಂದ ಕಾರ್ಯ ನಿರ್ವಹಿಸಿ, ನಿಮ್ಮ ರಕ್ಷಣೆಗೆ ನಾನಿದ್ದೇನೆ' ಎಂದು ಇಲಾಖಾ ಕಾರ್ಯದರ್ಶಿಗಳೊಂದಿಗೆ ನಡೆಸಿದ ಸಭೆಯಲ್ಲಿ ಧೈರ್ಯ ತುಂಬಿದ್ದರು ಮೋದಿ. ಮರುದಿನವೇ ಸಂಪುಟ ಕಾರ್ಯದರ್ಶಿ ಅಜಿತ್ ಸೇಠ್ 11 ಮಾರ್ಗದರ್ಶಿ ಸೂತ್ರಗಳನ್ನು ರವಾನಿಸಿದ್ದಾರೆ. ಈ ಸಂಬಂಧ ಕಾರ್ಯದರ್ಶಿಗಳ ಜತೆ ಶನಿವಾರ ಸಭೆ ನಡೆಸಿರುವ ಸೇಠ್, ಇವುಗಳನ್ನು ಅಳವಡಿಸಿಕೊಳ್ಳುವ ಸಂಬಂಧ ಸೋಮವಾರದ ಒಳಗಾಗಿ ಕ್ರಿಯಾಯೋಜನೆ ಸಲ್ಲಿಸುವಂತೆಯೂ ಸೂಚಿಸಿದ್ದಾರೆ. ತ್ವರಿತ ತೀರ್ಮಾನ, ಇಲಾಖೆಗಳ ನಡುವಿನ ಸಮನ್ವಯ, ನಾಗರಿಕ ಅರ್ಜಿಗಳನ್ನು ಸರಳಗೊಳಿಸುವುದು ಈ ಸೂತ್ರಗಳಲ್ಲಿ ಸೇರಿವೆ.

ಅಮೆರಿಕ ಭೇಟಿ ನಿಗದಿ ಇಲ್ಲ
ನರೇಂದ್ರ ಮೋದಿಯವರ ವಾಷಿಂಗ್ಟನ್ ಭೇಟಿಗೆ ಇನ್ನೂ ದಿನ ನಿಗದಿಯಾಗಿಲ್ಲ ಎಂದು ಅಮೆರಿಕ ತಿಳಿಸಿದೆ. 'ಸೆಪ್ಟೆಂಬರ್ನಲ್ಲಿ ನಡೆಯುವ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಭಾಗವಹಿಸಲಿರುವ ಮೋದಿಯವರನ್ನು ಸ್ವಾಗತಿಸಲು ಅಧ್ಯಕ್ಷ ಬರಾಕ್ ಒಬಾಮ ಮತ್ತು ವಿದೇಶಾಂಗ ಸಚಿವ ಜಾನ್ ಕೆರ್ರಿ ಉತ್ಸುಕರಾಗಿದ್ದಾರೆ. ಆದರೆ ಭೇಟಿ ದಿನಾಂಕ ಇನ್ನೂ ನಿಗದಿಯಾಗಿಲ್ಲ' ಎಂದು ವಿದೇಶಾಂಗ ಇಲಾಖೆ ಉಪವಕ್ತಾರೆ ಮೇರಿ ಹಾರ್ಫ್ ತಿಳಿಸಿದ್ದಾರೆ. ಒಬಾಮ-ಮೋದಿ ಭೇಟಿಗೆ ಅಮೆರಿಕ ಸೆ.30ರ ದಿನ ನಿಗದಿಪಡಿಸುವಂತೆ ಕೋರಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಶುಕ್ರವಾರ ತಿಳಿಸಿತ್ತು.

ಮೋದಿ ಏಕಾದಶ ಸೂತ್ರ

1    ಕಚೇರಿಗಳಲ್ಲಿ ಸ್ವಚ್ಛತೆ ಇರಬೇಕು. ಮೆಟ್ಟಿಲುಗಳು, ಪ್ಯಾಸೇಜ್ಗಳಲ್ಲಿ ನಿರುಪಯುಕ್ತ ವಸ್ತುಗಳು, ಆಲ್ಮೆರಾ ಇತ್ಯಾದಿಗಳನ್ನು ಇಡಕೂಡದು. ಕಚೇರಿ ಒಳಗೆ ಸಹ ಕಡತ, ಕಾಗದಪತ್ರಗಳನ್ನು ಸರಿಯಾಗಿ ಜೋಡಿಸಿಟ್ಟಿರಬೇಕು.
2    ತೀರ್ಮಾನ ತೆಗೆದುಕೊಳ್ಳುವ ಸ್ತರಗಳನ್ನು ಕಡಿಮೆ ಮಾಡಬೇಕು. ನಾಲ್ಕಕ್ಕಿಂತ ಹೆಚ್ಚು ಸ್ತರಗಳನ್ನು ಮೀರಕೂಡದು.
3    ಪ್ರತಿ ಇಲಾಖೆ ಅಪ್ರಸ್ತುತವಾಗಿರುವ ಕನಿಷ್ಠ 10 ನಿಯಮ, ಪ್ರಕ್ರಿಯೆಗಳನ್ನು ಗುರುತಿಸಬೇಕು. ಅಪ್ರಸ್ತುತ ಕಾನೂನುಗಳನ್ನೂ ಪಟ್ಟಿ ಮಾಡಬೇಕು. ಈ ನಿಯಮಗಳನ್ನು ತೆಗೆದು ಹಾಕುವುದರಿಂದ ಕಾರ್ಯದಕ್ಷತೆಗೆ ಸಮಸ್ಯೆ ಆಗಬಾರದು.
4    ದೀರ್ಘವಾಗಿರುವ ಅರ್ಜಿ ನಮೂನೆಗಳನ್ನು ಗುರುತಿಸಿ, ಸಂಕ್ಷಿಪ್ತಗೊಳಿಸಬೇಕು. ಸಾಧ್ಯವಿರುವಲ್ಲಿ ಅರ್ಜಿಗಳನ್ನು ಒಂದೇ ಪುಟಕ್ಕೆ ಸೀಮಿತಗೊಳಿಸಬೇಕು. ಅಧಿಕ ಮಾಹಿತಿ ತಂತ್ರಜ್ಞಾನ ಬಳಕೆ.
5    ಅನಗತ್ಯವಾಗಿರುವ, ಹಳೆಯ ಕಡತಗಳನ್ನು ನಾಶಪಡಿಸಬೇಕು. ಈ ಪ್ರಕ್ರಿಯೆ 3-4 ವಾರಗಳಲ್ಲಿ ಪೂರ್ಣಗೊಳ್ಳಬೇಕು. ಡಿಜಿಟಲೀಕರಣ ಸೇರಿದಂತೆ ಯಾವುದೇ ಉದ್ದೇಶಕ್ಕೆ ಕಡತ ವಿಲೇವಾರಿ ನಿಯಮಗಳಲ್ಲಿ ಇರುವ ಅವಧಿ ಮೀರಿ ಕಡತ ಇರಿಸಿಕೊಳ್ಳಬಾರದು.
6     ಇಲಾಖೆಗಳ ನಡುವೆ ಸಮನ್ವಯ ಇರಬೇಕು. ಅಗತ್ಯಬಿದ್ದಲ್ಲಿ ಇಲಾಖೆಗಳು ಪರಸ್ಪರ ಸಮಾಲೋಚಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕು.
7     ಇಲಾಖೆಗಳ ನಡುವೆ ಒಮ್ಮತದ ತೀರ್ಮಾನ ಸಾಧ್ಯವಾಗದಿದ್ದಲ್ಲಿ ಸಂಪುಟ ಸಚಿವಾಲಯ ಅಥವಾ ಪ್ರಧಾನಿಗಳ ಕಾರ್ಯಾಲಯಕ್ಕೆ ರವಾನಿಸಬೇಕು.
8     ಇಡೀ ಇಲಾಖೆ ಒಂದು ತಂಡವಾಗಿ ಕೆಲಸ ಮಾಡಬೇಕು. ಅಧೀನ ಸಿಬ್ಬಂದಿಗೆ ಪ್ರತಿ ಹಂತದಲ್ಲಿ ಅಗತ್ಯ ಮಾರ್ಗದರ್ಶನ, ಸಲಹೆ ನೀಡಬೇಕು.
9     ಯುಪಿಎ-2 ಸರ್ಕಾರದ ಐದು ವರ್ಷಗಳಲ್ಲಿ ಇಲಾಖೆಗೆ ನಿಗದಿಯಾಗಿದ್ದ ಗುರಿ ಸಾಧನೆ ಕುರಿತು ವಿಶ್ಲೇಷಣೆ ಮಾಡಿಕೊಳ್ಳಬೇಕು ಮತ್ತು ಪ್ರಧಾನಿಯವರಿಗೆ ಸಲ್ಲಿಸುವ ವರದಿಯಲ್ಲಿ ಈ ಮಾಹಿತಿ ಇರಬೇಕು.
10    ಸಾರ್ವಜನಿಕರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಕಾಲಮಿತಿಯಲ್ಲಿ ಅರ್ಜಿಗಳ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು.
11    ಸರ್ಕಾರ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement